ಹಸಿವೆಯೆಂದರೇ ಹೀಗೆಯಾ?!

ಹಸಿವೆಯೆಂದರೇ ಹೀಗೆಯಾ?
ಬೀದಿಯ ಜನರ ಓಡಾಟದ ಪರಿವೆ ಇಲ್ಲದೇ
ಕೊಳಕು ಸೀರೆಯಲ್ಲಿ ಸುತ್ತಿಕೊಂಡ
ಎಂಜಲನ್ನು ಗಬಗಬನೇ ನುಂಗುವುದು?

ಹಸಿವೆಯೆಂದರೇ ಹೀಗೆಯಾ?
ದುಡಿಯಲು, ಬೇಡಲು ಶಕ್ತಿಯಿಲ್ಲದ ಮುದುಕ
ಕೊಳಕು ಸೀರೆಯ ಹೆಂಗಸಿನ ಸೀರೆಯೋಳಗಣ
ಎಂಜಲ ಕಿತ್ತುಕೊಂಡು ತಾ ತಿನ್ನುವುದು?

ಹಸಿವೆಯೆಂದರೇ ಹೀಗೆಯಾ?
ತನ್ನೆಡೆಗೆ ಕೈಯಿಟ್ಟ
ನಿಶ್ಶಕ್ತ ಮುದುಕನ ಜಾಡಿಸುವುದು
ತಲೆಯೊಡೆದು ರಕ್ತ ಸುರಿಯುವಂತೆ
ಕಲ್ಲು ಹೊಡೆಯುವುದು?

ಹಸಿವೆಯೆಂದರೇ ಹೀಗೆಯಾ?
ತನ್ನ ತೆವಲಿನ ಹೆಂಗಸಿನ
ಸೆರಗು ಮುಟ್ಟಿದ ಮುದುಕನಿಗೆ
ಹರಿದ ಎಕ್ಕಡ ಕೈಗೆತ್ತಿಕೊಳ್ಳುವುದು?

ಹಸಿವೆಯೆಂದರೇ ಹೀಗೆಯಾ?
ಕತ್ತಲಿಗೆ ಕಾಯದೇ ಅರೆ ಸುತ್ತಿಕೊಂಡ ಸೀರೆಯ
ಬೀದಿಯಲ್ಲೇ ಬಿಚ್ಚಿ ಹಸಿದ ಗಂಡಸಿಗೆ
ಕೊಟ್ಟುಕೊಂಡು ಹಸಿವು ನೀಗಿಸಿಕೊಳ್ಳುವುದು?

ಹಸಿವೆಯೆಂದರೇ ಹೀಗೆಯಾ?
ತಲೆಯೊಡೆದು ಸೊರುತ್ತಿರುವ ರಕ್ತದ ಪರಿವಿಲ್ಲದೆ
ಬೀಳುತಿರುವ ಏಟಿನ ಕದಲಿಕೆಯಿಲ್ಲದೇ
ನಿರ್ಲಿಪ್ತವಾಗಿ ಎಂಜಲ ನೆಕ್ಕುತ್ತಿರುವುದು?

ಹಸಿವೆಯೆಂದರೇ ಇದೆಯಾ?!
ಒಂಟಿ ಬದುಕಿನ ಹೋರಾಟ..!
ಜಂಟಿ ಬದುಕಿಗಾಗಿ ಹೋರಾಟ..!

ಪ್ರೇರಣೆ:ಮೆಜೆಸ್ಟಿಕ್ ನ ಸ್ವಪ್ನ ಬುಕ್ ಹೌಸ್ ರೋಡಿನಲ್ಲಿ ಕಂಡ ಘಟನೆ.

ನಿನ್ನ ಹೊರತಾಗಿ.. !!

ರಾಣಿಯಾಗುವ ಬಯಕೆಯಿಲ್ಲ

ನಿನ್ನ ಹೃದಯ ಸಿಂಹಾಸನವೇ

ನನ್ನದಾಗಿರುವಾಗ


ಸಿರಿ ಸಂಪತ್ತಿನಲ್ಲಿ

ಮೀಯುವ ಆಸೆಯಿಲ್ಲ

ಸುರಿವ ಸೋನೆಯ ಜೊತೆ

ನೀನಿರುವಾಗ

ಜಗತ್ತಿನ ಎಲ್ಲಾ ಸುಖ
ನನ್ನದಾಗಿರಬೇಕೆಂಬ ಮಂಪರಿಲ್ಲ
ಬೇಸರದ ಸಂಜೆಗಳಿಗೆ
ನಿನ್ನ ಹೆಗಲಿರುವಾಗ

ಅನುಕ್ಷಣವೂ ನಿನ್ನ ಸಾಂಗತ್ಯ ಬೇಕಿಲ್ಲ
ಸಂಜೆ ಮಬ್ಬಲ್ಲಿ ಕಿರುಬೆರಳಿಡಿದು
ನೀ ನಡೆಸುವಾಗ

ಸುಂದರನಾದ ಸಂಗಾತಿಯ
ಕನವರಿಕೆ ಕನಸುಗಳಿಲ್ಲ
ಕಡು ಮೈಯ ತಿಳಿ ಮನದ
ನಿನ್ನ ನಾ ಪಡೆದಿರುವಾಗ

ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ
ನಾಯಕನ ಪಡೆವ ಹಂಬಲವಿಲ್ಲ
ಕಣ್ಣಲ್ಲಿ ಕನಸಿಡುವ
ಕನಸುಗಾರ ಜೊತೆಯಿರುವಾಗ

ಸೂರ್ಯಪ್ರಭೆಯೆ ಹೊತ್ತಿಹೆನೆಂಬ
ಹಮ್ಮಿನ ಗಂಡಸಿನ ದಾಹವಿಲ್ಲ
ರಾತ್ರಿಯ ಮಡಿಲಿಗೆ ತಣ್ಣಗಿನ
ಬೆಳದಿಂಗಳ ಸುರಿವ ಚಂದಿರ ನನ್ನೊಳಿರುವಾಗ

ನನ್ನವ ಅಷ್ಟೆಲ್ಲಾ ಆಗಿಬಿಡಬೇಕೆಂಬ
ಸುಳ್ಳು ಕನಸುಗಳಿಲ್ಲ
ಇಷ್ಟೇ ಇಷ್ಟಾಗಿ ಇಷ್ಟವಾಗಿ
ನನ್ನೊಳಗೆ ನೀ ಇಳಿದಿರುವಾಗ..


Blog at WordPress.com.

Up ↑