ದೂರವಿದ್ದಷ್ಟು ಹೊತ್ತಿನ ಕ್ಷಣಕ್ಷಣಗಳನ್ನು ಲೆಕ್ಕವಿಡುವ ನನಗೆ, ನೀನು ಸಿಕ್ಕಿದ ಕೂಡಲೇ ಸಮಯದ ಲೆಕ್ಕವೇ ತಪ್ಪಿ ಹೋಗುತ್ತದೆ ನೋಡು.. ಓಡಿ ಬಂದು ನಿನ್ನ ತೋಳಲ್ಲಿ ಹುದುಗುವಾಗ ಜಗತ್ತೆಲ್ಲವನ್ನೂ ಮರೆಸುವಂತೆ ನೆತ್ತಿ ಮೇಲೊಂದು ಮುತ್ತಿಡುವ ಕಲೆ ಕಲಿಸಿಕೊಟ್ಟವರ್ಯಾರು ನಿನಗೆ..? ಬೇಡ ಬೇಡವೆಂದರೂ ಹೆಣ್ಮನಕ್ಕೆ ನಾಚಿಕೆಯಡರುತ್ತದೆ. ನಿನಗೂ ನಾಚಿಕೆಯಾಗುತ್ತಾದಾ ಎಂದು ಕೇಳುವ ತುಂಟ ನಗುವಿಗೆ ಕಾಯುವುದರಲ್ಲಿ ಎಂಥಹ ಸುಖವಿದೆ ಗೊತ್ತಾ..!?
ನಿನ್ನಲ್ಲಿಗೆ ಓಡಿ ಬರುವುದಕ್ಕಿಂತ ಮುಂಚೆ ತಿದ್ದಿಕೊಂಡ ಕಾಡಿಕೆ ಅರಳಲಿ, ತುಟಿಯ ರಂಗು ಕರಗಲಿ ಅನ್ನುವ ನನ್ನ ಅನಾಮಧೇಯ ಬೇಡಿಕೆಗೆ ನೀನೇ ಹೆಸರಿಡಬೇಕು ನೋಡು! ರಾತ್ರಿ ಹಗಲುಗಳೆಲ್ಲಾ ನಮ್ಮದೇ ಆಗುವ ಹೊತ್ತಲ್ಲಿ ಇಬ್ಬರೂ ಒಂದೇಯಾಗುವುದು, ಒಂದು ‘ಎಂದೂ’ ಆಗುವುದರಲ್ಲಿಯೇ ಅಲ್ಲವಾ ಪ್ರೇಮ ಜನಿಸುವುದು! ಪ್ರೇಮದ ಬಿಸಿ ಅಪ್ಪುಗೆಯಿಂದ ತಪ್ಪಿಸಿಕೊಂಡು ಹೊರಳಾಡುವಾಗ ಮತ್ತೊಂದು ಮುತ್ತು ಮುಚ್ಚಿದ ಕಣ್ಣ ಮೇಲೆ! ಇನ್ನಷ್ಟು ನೀ ಹತ್ತಿರ ಎಳಕೊಂಡು ನಿದ್ರಿಸುವಾಗ ಸುಖದ ಗಡಿಯಾರ ಹಾಗೇ ನಿಲ್ಲಬಾರದೇಕೇ ಅನಿಸುವುದು ನನಗೊಬ್ಬಳಿಗೇನಾ..? ಕೇಳೋಣವೆಂದರೆ ನಿದ್ದೆ ನಿನಗೆ.. !
ಹುಡುಗಾ, ಕೊಟ್ಟು ಮಾತ್ರವೇ ಉಳಿವ ಪ್ರೇಮದಲ್ಲಿ ನಂಬಿಕೆಯಿಲ್ಲ ನನಗೆ.. ಹುಡುಗಿಯರಿಗೆ ಕೊಟ್ಟಷ್ಟು ಪಡೆವ, ಪಡೆದಷ್ಟು ಕೊಡುವ ಅಗಣಿತ ಪ್ರೇಮದ ಜರೂರತ್ತಿರುತ್ತದೆ!
ಅರ್ಥವಾದೀತಾ ನಿನಗೆ?
ಪ್ರೇಮೋಜ್ವಲ ಭಾವ ..
LikeLike