ಬೀದಿಪಾಲಾದ ಅಮ್ಮಂದಿರು..

ಒಂದೆರಡು ತಿಂಗಳ ಹಿಂದೆ ಅವರು “ಸುಷ್ಮಾ.. ಮಾರ್ಚ್‌ನಲ್ಲಿ ಬೆಂಗಳೂರಿಗೆ ಬರೋದಿದೆ.. ನೀನ್ಯಾವ ಏರಿಯಾದಲ್ಲಿ ಇರೋದು” ಅಂತ ಕೇಳಿದ್ರು. ನಾನು ನಾನಿರುವ ಏರಿಯಾದ ಹೆಸರು ಹೇಳಿ, ಏನು ಸಮಾಚಾರ ಎಂದು ವಿಚಾರಿಸಿದರೆ, “ಸ್ಟೈಕ್‌ ಮಾರಾಯ್ತೀ.. ಈ ಸಂಬ್ಳ ಎಲ್ಲಿ ಸಾಲುತ್ತೆ ಹೇಳು.. ” ಅಂದ್ರು.
“ಸರಿ.. ಎಲ್ಲಿ ಉಳ್ಕೋತೀರಾ..? ಊಟ ವಸತಿ ವ್ಯವಸ್ಥೆ ಎಲ್ಲಿ..?” ಅಂತ ಕೇಳಿದ್ರೆ, ಬೆಂಗಳೂರಿನ ಗಂಧಗಾಳಿ ಗೊತ್ತಿಲ್ಲದ ಅವರು “ಅಯ್ಯೋ ಅದೆಲ್ಲಿಯೋ.. ಯಾವ ಜಾಗವೋ ಗೊತ್ತಿಲ್ಲ.. ಯೂನಿಯನ್‌ನವ್ರು ಹೇಳ್ತಾರೆ.. ಹೋಗೋದು..” ಅಂದ್ರು.
“ಬಂದಾಗ ಫೋನ್ ಮಾಡಿ..” ಅಂದು ಸುಮ್ಮನಾಗಿದ್ದೆ.

ಅವತ್ತು ಹಾಗಂದವರು ಅಂಗನವಾಡಿ ಟೀಚರ್‌.. ನನ್ನಂತಹ ನೂರಾರು ಮಕ್ಕಳಿಗೆ ಪಾಠ ಹೇಳಿಕೊಟ್ಟವರು.. ಅಂತಹ ಗುರುಗಳು ಇವತ್ತು ಬೀದಿಯಲ್ಲಿ ನಿಂತು ಸರಕಾರದ ಮುಂದೆ “ನಮಗೆ ಕನಿಷ್ಠ ಹತ್ತುಸಾವಿರ ರೂಪಾಯಿ ವೇತನ ನಿಗದಿ ಮಾಡಿ, ನಮ್ಮ ಜೀವನ ನಾವು ಸಾಗಿಸ್ಬೇಕು” ಅಂತ ಅಂಗಲಾಚ್ತಾ ಇದ್ದಾರಲ್ಲ.. ನಮ್ಮ ನೀತಿಗೆಟ್ಟ ವ್ಯವಸ್ಥೆಯ ಬಗ್ಗೆ ಹೇಸಿಗೆ ಹುಟ್ಟುತ್ತೆ.

ಬಾಲ್ಯದಲ್ಲಿ ಅಮ್ಮನ ನಂತರ ನಾವು ನೋಡಿದ ಟೀಚರ್‌ ಈ ಅಂಗನವಾಡಿ ಟೀಚರ್‌ಗಳೇ.. ಅಜ್ಜಿಯ ನಂತರ ಮುದ್ದು ಮಾಡಿ ತುತ್ತು ತಿನ್ನಿಸ್ತಾ ಇದ್ದಿದ್ದು ಅಂಗನವಾಡಿಯ ಚಿಕ್ಕಟೀಚರ್‌ಗಳೇ [ಅಂಗನವಾಡಿ ಸಹಾಯಕ ಕಾರ್ಯಕರ್ತರು]. ಈ ಟೀಚರ್‌ಗಳು ಹೇಳಿಕೊಟ್ಟ , ತಿದ್ದಿಕೊಟ್ಟ ಅ ಆ ಇ ಈ ಯನ್ನೇ ನಾವು ಅಮ್ಮನೆದುರು ಹೆಮ್ಮೆಯಿಂದ ಮೊದಲು ತೋರಿಸಿದ್ದು, ಕೋಳಿ ಕೂಗಿತೇಳು ಕಂದಾ.. ಸೂರ್ಯಪೂರ್ವದಲ್ಲಿ ಬಂದ ಅಂತೆಲ್ಲಾ ಹಾಡು ಹಾಡಿ, ಡ್ಯಾನ್ಸ್‌ ಮಾಡಿ ಬಹುಮಾನ ಗಿಟ್ಟಿಸಿಕೊಂಡಿದ್ದು, ಸ್ಲೇಟ್‌ನಲ್ಲಿ ಬಿಡಿಸಿದ ರಾಷ್ಟ್ರಧ್ವಜದ ಚಿತ್ರಕ್ಕೆ ಒಂದು ಬಾಕ್ಸ್ ಬಳಪವನ್ನುಪಡೆದಿದ್ದು.. ಆಹಾ.. ಹಿಂದಿರುಗಿ ನೋಡಿದರೆ ಅದೆಂತಹ ಸುಂದರ ನೆನಪುಗಳನ್ನು ಕೊಟ್ಟಿವೆ ಈ ಅಂಗನವಾಡಿಗಳು.

ಕನ್ನಡ ವರ್ಣಮಾಲೆ, ಸಂಖ್ಯೆಗಳು, ವಾರಕ್ಕೆಷ್ಟು ದಿನಗಳು..?ಯಾವ್‌ಯಾವುವು..?, ವರ್ಷಕ್ಕೆ ತಿಂಗಳೆಷ್ಟು..?ಅವು ಯಾವುದು..?, ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಪೌಷ, ಮಾಘಗಳು .. ನಮ್ಮ ನಾಲಿಗೆಯ ತುದಿಯಲ್ಲಿ ನಲಿದಿದ್ದು ಒಂದಿಷ್ಟು ಶಿಶುಗೀತೆಗಳು, ಚಿತ್ರ ಬಿಡಿಸೋದು, ಆಟಗಳು, ಒಂದಿಷ್ಟು ಬಣ್ಣಬಣ್ಣದ ಆಟಿಕೆಗಳನ್ನು ನಾವು ಕಂಡಿದ್ದು.. ಅಂಗನವಾಡಿಗಳಿಂದಲೇ.. ಹೌದು..! ಎರಡರಿಂದ ಐದರವರೆಗಿನ ನಮ್ಮ ಬಾಲ್ಯಕಾಲವನ್ನು ಇಷ್ಟೊಂದು ಸುಭೀಕ್ಷವಾಗಿಟ್ಟಿದ್ದು ಈ ನಮ್ಮ ಅಂಗನವಾಡಿಗಳು ಮತ್ತು ಅದರ ಕಾರ್ಯಕರ್ತರು.

ಪುಟ್ಟಮಕ್ಕಳನ್ನು ಮನೆಯವರಿಗೇ ಸುಧಾರಿಸಲು ಆಗೋದಿಲ್ಲ ಅಂತಾದ್ರಲ್ಲಿ ಈ ಅಮ್ಮಂದಿರು ಅದೆಷ್ಟೋ ಎಳೆಯ ಕಂದಮ್ಮಗಳನ್ನು ಅದ್ಹೇಗೆ ಜೋಪಾನ ಮಾಡಿದ್ದಾರೋ..! ನಾನು ಅಂಗನವಾಡಿಗೆ ಹೋಗುತ್ತಿದ್ದ ಕಾಲದಲ್ಲಂತೂ ಮೂವತ್ತರಿಂದ ನಾಲ್ವತ್ತು ಜನ ಮಕ್ಕಳು ಖಾಯಂಮ್ಮಾಗಿ ಬರುತ್ತಿದ್ದರು.. ದಿನಾ ಮಧ್ಯಾಹ್ನದ ಹೊತ್ತು ಊಟ. ಎಲ್ಲರಿಗೂ ಸಾಲಾಗಿ ತಟ್ಟೆ ಹಾಕಿ ಊಟ ಬಡಿಸಿ, ಊಟದ ಮುಂದೆ ಕೈಮುಗಿದು “ಓಂ ಸಹನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ | “ ಎಂದು ಪ್ರಾರ್ಥಿಸಿ ಊಟ ಮಾಡಲು ಕಲಿಸಿವರೇ ಇಲ್ಲಿನ ಟೀಚರ್‌ಗಳು. ಒಂದು ಅಗಳೂ ಚೆಲ್ಲದ ಹಾಗೆ ಊಟ ಮಾಡೋದು, ಶಿಸ್ತು ಇವೆಲ್ಲವನ್ನೂ ಎಳೆಯಲ್ಲೇ ಕಲಿಸಿದ್ದು ಇದೇ ಅಂಗನವಾಡಿಗಳು.

ಇದೆಲ್ಲಾ ತೊಂಭತ್ತರ ದಶಕದ ಮಧ್ಯಮ ಮತ್ತು ಕೊನೆ ಭಾಗದ ಕಥೆಯಾದರೆ, ಎರಡುಸಾವಿರದ ನಂತರದ್ದು ಮತ್ತೊಂದು ಕಥೆ. ಮೊದಲು ತಣ್ಣಗೆ ಹರಿಯುತ್ತಿದ್ದ ಝರಿಗೆ, ನದಿಯಷ್ಟು ವೇಗವಾಗಿ ಹರಿಯಿರಿ ಅಂದಿತು ಸರಕಾರ.. ಸಿಲಬಸ್ಗಳನ್ನು ಮಾಡಿತು, ರಾಶಿರಾಶಿ ಆಟಿಕೆಗಳನ್ನು, ಬಣ್ಣಬಣ್ಣದ ಪೋಸ್ಟರ್‌ಗಳನ್ನು ತಂದು ಸುರುವಿತು.. ಆದರೆ ಕಟ್ಟಡ ಹಳೆಯದಾಗಿದೆ ಸ್ವಾಮಿ, ಪುಟ್ಟದಾಗಿದೆ ಸ್ವಾಮಿ ನಿಮ್ಮ ಪೋಸ್ಟರು ಹಾಕುವುದಕ್ಕೂ ಜಾಗವಿಲ್ಲ ಇದಕ್ಕೊಂದು ವ್ಯವಸ್ಥೆ ಮಾಡಿ ಅಂದರೆ ಕಣ್ಣುಮುಚ್ಚಿ ಕೂತಿತು ಸರಕಾರ. ಅಂಗನವಾಡಿಗೆ ಬರುವ ಮಕ್ಕಳಿಗಲ್ಲದೇ ಬಸುರಿಯರಿಗೆ, ಬಾಣಂತಿಯರಿಗೆ, ಪೌಷ್ಠಿಕಾಂಶದ ಕೊರತೆಯಿರುವ ಮಕ್ಕಳಿಗೆ ಅಂಥ ಹೆಚ್ಚುವರಿ ಅಕ್ಕಿ, ಬೇಳೆಗಳ ದಾಸ್ತಾವೇಜುಗಳನ್ನು ಕಳಿಸತೊಡಗಿತು, ಅಂಗನವಾಡಿಯ ಕಾರ್ಯಕರ್ತರೇನೋ ಅದನ್ನು ಸರಿಯಾಗಿ ಹಂಚಲು ಟೊಂಕಕಟ್ಟಿ ನಿಂತರು, ಆದರೆ ಆ ಅಷ್ಟೂ ಸಾಮಾನುಗಳನ್ನು ಇಡುವುದಕ್ಕೆ ಜಾಗವೆಲ್ಲಿದೆ..?! ಊರಿನವರ್‍ಯಾರೋ “ಇಲ್ಲಿ ಇಡಿಸಿ ಟೀಚರ್‌.. ಅಂಗನವಾಡಿದ್ದಲ್ವಾ..?” ಅಂದು ತಮ್ಮ ಮನೆಯಲ್ಲಿ ಜಾಗ ಕೊಟ್ಟು ಪುಣ್ಯಕಟ್ಟಿಕೊಳ್ತಾ ಇದ್ರು.. ಇನ್ನು ಅದನ್ನು ಹಂಚುವ ಬಗೆಗೆ ಬಂದರೆ, ಊರಿನ ಅಷ್ಟೂ ಜನರ ಮನೆಗಳ ಜೊತೆ ಸಂಪರ್ಕ ಇಟ್ಟುಕೊಂಡು, ಒಬ್ಬೊಬ್ಬರಿಗೆ ಇಂತಿಷ್ಟು ಅಂತ ಪ್ರತಿತಿಂಗಳೂ ತೂಕ ಹಾಕಿ ಕೊಡಬೇಕು.. ಬರದೇ ಇದ್ದವರಿಗೆ ಬನ್ನಿ ತೆಗೆದುಕೊಂಡು ಹೋಗಿ ಎಂದು ದಂಬಾಲು ಬೀಳಬೇಕು.. ಸ್ವಂತ ಖರ್ಚಿನಲ್ಲಿ ಆಗಾಗ್ಗೆ ಅವರಿಗೆ ಫೋನ್ ಮಾಡಿ ನೆನಪಿಸಬೇಕು.. ಬಸುರಿಯರ, ಬಾಣಂತಿಯರ ಆರೋಗ್ಯ ವಿಚಾರಿಸಿಕೊಳ್ಳಬೇಕು.. ಪೋಲಿಯೋ ಲಸಿಕೆ ಇದ್ದಾಗಲಂತೂ ಪುಟ್ಟ ಮಕ್ಕಳಿರುವ ಅಷ್ಟೂ ಗ್ರಾಮಸ್ಥರಿಗೂ ಮಾಹಿತಿ ನೀಡಿ, ಅವರನ್ನು ಕಲೆ ಹಾಕಿ ಅವರ ಮಕ್ಕಳಿಗೆ ಲಸಿಕೆ ಹಾಕಿಸುವ ಇವರ ಬವಣೆ ಆ ದೇವರಿಗೇ ಪ್ರೀತಿ..!! ಇನ್ನು ಜಣಗಣತಿ, ಜಾತಿಗಣತಿಗಳಲ್ಲಿ ಇಡೀ ಊರೂರು ಸುತ್ತಬೇಕು.

ಇಷ್ಟರ ಮೇಲೆ ಊರವರಿಂದ, ಮೇಲಾಧಿಕಾರಿಗಳಿಂದ ಅನಿಸಿಕೊಳ್ಳಬೇಕು.. ಅದರಲ್ಲೂ ಈಗಿನ ತಾಯಂದಿರಂತೂ “ನನ್ನ ಮಗನಿಗೆ/ ಮಗಳಿಗೆ ಬೈದಿರಂತೆ..? ಯಾಕ್ ಬೈದ್ರಿ ಟೀಚರ್‍..?” ಅಂತ ಟೀಚರ್‌ಗೆ ಹೊಡೆಯೋ ಲೆವೆಲ್‌ಗೆ ಮಗುವಿನ ದೂರು ವಿಚಾರಿಸಿಕೊಳ್ಳಲು ಬರುತ್ತಾರೆ. ಇನ್ನು ಕೆಲವು ಗ್ರಾಮಸ್ಥರು “ಮಕ್ಕಳಿಗೆ ಬರೋ ಅಕ್ಕಿ ಬೇಳೆಯನ್ನು ಆ ಇಬ್ಬರು ಟೀಚರ್‌ಗಳೇ ನುಂಗಿ ನೀರ್‍ ಕುಡ್ಯೋದಲ್ವಾ..?” ಅಂತ ಯಾವುದೋ ದ್ವೇಷಕ್ಕೆ ಸುಖಾಸುಮ್ಮನೆ ಆಪಾದನೆ ಮಾಡೋರೂ ಇದ್ದಾರೆ [ಅಪವಾದಗಳಿರಬಹುದು].

ಇದಿಷ್ಟೆನಾ ಇವರ ಕೆಲಸ ಅಂತಂದುಕೊಂಡರೆ, ಇವರ ಕೆಲಸ ಇಲ್ಲಿಗೆ ಮುಗಿಯೋದಿಲ್ಲ.. ದಿನಾ ಬೆಳಿಗ್ಗೆ ಹತ್ತರಿಂದ ನಾಲ್ಕರವರೆಗೆ ಮಕ್ಕಳ ಕೆಲಸವಾದರೆ, ನಂತರದ್ದು ಸರಕಾರ ಹಮ್ಮಿಕೊಂಡ ಕೆಲಸವನ್ನು ಜನರಿಗೆ ಮುಟ್ಟಿಸುವ ಕೆಲಸ.. ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳು, ಉಳಿತಾಯ ಯೋಜನೆಗಳ ಮೇಲುಸ್ತುವಾರಿ, ಬ್ಯಾಂಕ್‌ ವ್ಯವಹಾರಗಳು, ಜನಗಣತಿ, ರೇಷನ್‌ ಕಾರ್ಡ್, ವೋಟರ್‌ ಕಾರ್ಡ್, ಬಸುರಿ ಬಾಣಂತಿಯರ ಆರೋಗ್ಯ ಮತ್ತವರಿಗೆ ಆಹಾರ ವಿರತಣೆ, ಸರಕಾರ ತರುವ ವಿವಿಧ ಯೋಚನೆಗಳನ್ನು ಜನರಿಗೆ ಪರಿಚರಿಯುವುದು ಮತ್ತು ಅದರ ಅನುಷ್ಠಾನ, ಸರಕಾರದ ಆರೋಗ್ಯ ವಿಮೆಗಳು, ವಿಧವಾವೇತನಗಳು, ಅಂಗವಿಕಲರ ವೇತನಗಳು, ಸಂಧ್ಯಾಸುರಕ್ಷಾ… .. ಪಟ್ಟಿಮುಗಿಯೋದಿಲ್ಲ .. ಇಂತಹ ಎಲ್ಲಾ ಕೆಲಸಗಳನ್ನು ಸರಕಾರ ವಹಿಸಿದ್ದು ಈ ಬಡ ಅಂಗನವಾಡಿ ಕಾರ್ಯಕರ್ತೆಯರ ಮೇಲೆಯೇ.. ಗ್ರಾಮ ಪಂಚಾಯತ್‌ ಅಧಿಕಾರಿಗಳಾಗಲಿ ಸದಸ್ಯರಾಗಲಿ, ಇತ್ತೀಚಿಗಿನ ಆಶಾ ಕಾರ್ಯಕರ್ತರಾಗಲಿ ಇದಕ್ಕೆ ಪೂರಕವಾಗಿ ಕೆಲಸ ಮಾಡೋದಿಲ್ಲ.. ಬದಲಾಗಿ “ನಿಮ್ ಕೆಲ್ಸ ಅಲ್ವಾ ಟೀಚರ್‍..? ಮಾಡಿ!!” ಅಂತ ಕೈಚೆಲ್ಲಿಬಿಡುತ್ತಾರೆ.

ಇನ್ನು ಸರಕಾರದ ಕೆಲಸವೆಂದರೆ ಎಲ್ಲದಕ್ಕೂ ದಾಖಲೆ ಒದಗಿಸುವುದು ಖಡ್ಡಾಯ. ಆದರೆ ದಾಖಲೀಕರಣ ಪ್ರಕ್ರಿಯೆ ಹೇಗಿದೆ ಎಂದರೆ, ಗಣಕಯಂತ್ರದ ಯುಗದಲ್ಲೂ ಪುಸ್ತಕದಲ್ಲಿ ಬರೆದಿಡುವ ಹಳೆವಿಧಾನವೇ ಅಂಗನವಾಡಿ ಕಾರ್ಯಕರ್ತೆಯರಿಗೆ ಗಟ್ಟಿ..!! ಪ್ರತಿಯೊಂದನ್ನು ಬರೆದಿಡಬೇಕು.. ಯಾವೊಬ್ಬ ಕಾರ್ಯಕರ್ತೆಯೂ ತನ್ನ ಕೆಲಸ ಅವಧಿಯ ಹತ್ತರಿಂದ ನಾಲ್ಕರವೆರೆಗೆ ಈ “ಡ್ಯಾಕುಮೆಂಟೇಷನ್‌” ಕೆಲಸವನ್ನು ಮುಗಿಸಿದ ಉದಾಹರಣೆ ಇಲ್ಲ. ಸಂಜೆ ಮನೆಗೆ ರಾಶಿ ಪುಸ್ತಕಗಳನ್ನು ತಂದು, ರಾತ್ರಿಯವರೆಗೆ ಬರೆಯುತ್ತಾ ಕೂರುವವರೇ ಎಲ್ಲಾ.

ಸರಕಾರಕ್ಕಾಗಿ, ಗ್ರಾಮಕ್ಕಾಗಿ, ಎಳೆಯ ಮಕ್ಕಳಿಗಾಗಿ ಇಷ್ಟೆಲ್ಲಾ ದುಡಿಯುವ ಈ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳೊಪ್ಪತ್ತಲ್ಲಿ ಸಿಗೋದು ಆರೇಳು ಸಾವಿರ ರೂಪಾಯಿಗಳು.. ಇಷ್ಟು ದಿನ ಶಾಂತವಾಗಿ ಅಹವಾಲು ಕೊಟ್ಟಿದ್ದಾಯ್ತು, ಹೋರಾಟ ಮಾಡಿದ್ದಾಯ್ತು.. ಇನ್ನೆಷ್ಟು ದಿನ ಹೀಗೆ..?! ಈಗ ಬೀದಿಗಳಿದಿದ್ದಾರೆ.. ಬೇರೆ ದಾರಿಯಿಲ್ಲ.. ಘನ ರಾಜ್ಯ ಸರಕಾರ “ಸ್ತ್ರೀಬಲಿಕರಣ”ದ ಮಾತಾನಾಡುತ್ತಾ “ಸ್ತ್ರೀದಿನಾಚರಣೆ” ಮಾಡುತ್ತಾ ಕಣ್ಣುಮುಚ್ಚಿ ಕೂತಿದೆ.. ನಮ್ಮ ಅಮ್ಮನಂತವರು ಮೂರು ದಿನಗಳಿಂದ ತಮ್ಮ ಹಕ್ಕಿಗಾಗಿ ಹೋರಾಡುತ್ತಾ ಬೀದಿಪಾಲಾಗಿದ್ದಾರೆ.

#anganwadi #live_and_let_live #KarnatakaStateGovt

Advertisements