ಪಾಪಪ್ರಜ್ಞೆ

ನಾನು ಅಡ್ಮಿಟ್ ಆಗಿದ್ದೆ.
ನನ್ನ ಪಕ್ಕದ ಬೆಡ್ಡಿನ ಮೇಲೆ ಸುಮಾರು ಮುವತೈದು ಮೂವತ್ತಾರು ವಯಸ್ಸಿನ ಮಹಿಳೆಯೊಬ್ಬರು ಅಡ್ಮಿಟ್ ಆಗಿದ್ದರು. ಸಿಸ್ಟರ್ ಬಂದು ಅವರಿಗೆ ಏನೇನೊ ಟೆಸ್ಟು ಗಳು ಅದು ಇದು ಮಾಡುತ್ತಿದ್ದರು. ಅದನ್ನು ನೋಡಿ ನನ್ನ ಹಣೆಯ ಮೇಲೆ ಬೆವರು ಸಾಲುಗಟ್ಟಿ ನಿಂತಿತ್ತು. ಸಿಸ್ಟರ್ ನಕ್ಕು, ಇದೆಲ್ಲಾ ನಿನಗಿಲ್ಲಮ್ಮ ಅಂದಾಗ ಸಮಾದಾನದ ನಿಟ್ಟುಸಿರು ನನ್ನಲ್ಲಿ. ಹುಟ್ಟಿ ಇಪ್ಪತ್ತೈದು ವರ್ಷಗಳಲ್ಲಿ ಒಮ್ಮೆಯೂ ಹಾಸ್ಪಿಟಲ್ ಲಿ ಅಡ್ಮಿಟ್ ಅದವಳಲ್ಲ. ಇಂಜೆಕ್ಷನ್ ಎಂದರೆ ಜೀವ ಹೋಗಿಬಿಡುವಷ್ಟು ಭಯ.ಇಂತಹದರಲ್ಲಿ ನನ್ನವ ಡಾಕ್ಟರ್ ಗೆ ಹೇಳುತ್ತಿದ್ದ. ಡ್ರಿಪ್ಸ್ ಹಾಕಿಬಿಡಿ. ನಾ ಬೇಡವೆಂಬಂತೆ ಅವನ ಮುಖ ನೋಡಿ ಅಂಗಲಾಚಿದ್ದೆ. ಅಂವ ಒಮ್ಮೆಯಷ್ಟೇ ಚಿಕ್ಕ ಸೊಳ್ಳೆ ಕಚ್ಚಿದಂತ ನೋವು. ಆಮೇಲೆ ಇಂಜೆಕ್ಷನ್ ಚುಚ್ಚಲ್ಲ. ಏನಿದ್ದರೂ ಡ್ರಿಪ್ಸ್ ಲೇ ಹಾಕಿಬಿಡ್ತಾರೆ ನೋವಿರಲ್ಲ ಅಂದ. ತುಸು ಸಮಾದಾನವಾಯಿತು ನನಗೆ.
ಸಿಸ್ಟರ್ ಕಿವಿಯಲ್ಲಿ “ಸ್ವಲ್ಪ ನಿದಾನ ಚುಚ್ಚಿ ಸಿಸ್ಟರ್-ನೋವಾಗದಂತೆ” ಅಂದ.
ಸಿಸ್ಟರ್ “ಇವರಿಗೆ ಚುಚ್ಚಿದರೆ ನಿಮಗೇ ಚುಚ್ಚಿದ ಹಾಗೆ ಆಡುತ್ತಿರಲ್ರಿ” ತುಂಟ ನಗೆ ನಕ್ಕರು.
ನನ್ನವನ ಕಡೆಗೊಂದು ಹೆಮ್ಮೆಯ ನೋಟ.
ಡಾಕ್ಟರ್ ಅದೇನೇನೋ ಟ್ಯಾಬ್ಲೆಟ್ಸ್, ಇಂಜೆಕ್ಷನ್ಸ್ ಬರೆದ ಚೀಟಿ ಇವನ ಕೈಗಿತ್ತು ಮೆಡಿಕಲ್ ಶಾಪ್ ನಿಂದ ತರುವಂತೆ ಹೇಳಿದ್ರು. ಇವ ನನ್ನ ಮುದ್ದು ಮಾಡಿ, ಇರು ಹತ್ತು ನಿಮಿಷ ತಂದು ಬಿಡ್ತೀನಿ ಅಂದಾಗ, ಬೆಳಿಗ್ಗಿಂದ ನಾನು ಏನೂ ಆಹಾರ ಸೇವಿಸುವ ಹಾಗಿಲ್ಲವೆಂದು ತಾನು ಕೂಡ ಉಪವಾಸ ಇದ್ದಿದ್ದರ ನೆನಪಾಗಿ “ಹಾಗೆ ತಿಂಡಿ ತಿಂದು ಬಾ.. ” ಅಂದೇ. ಯಜಮಾನ ಜಪ್ಪಯ್ಯ ಅಂದರೂ ಒಪ್ಪಲಿಲ್ಲ.ಹಾಗೆ ಹೊರಟ. ಪಕ್ಕದ ಬೆಡ್ ನ ಹೆಂಗಸಿನ ಗಂಡ ಕೂಡ ಮೆಡಿಕಲ್ ಶಾಪ್ ಗೆ ಹೊರಟಿದ್ದರು. ಆ ಹೆಂಗಸು ನಿದಾನವಾಗಿ ನನ್ನಲ್ಲಿ ಮಾತನಾಡಲಾರಂಭಿಸಿತು. 

“ಏನಾಯ್ತು… ?” ಆಕೆಯ ಪ್ರಶ್ನೆ. 
“ಈಗಲೇ ಮಗು ಬೇಡಾಂತ… ” ಉತ್ತರಿಸಿದೆ 
“ಯಾಕೆ..? ಚಿಕ್ಕವಯಸ್ಸು ಈಗಲೇ ಮಾಡಿಕೊಂಡು ಬಿಡಬೇಕು… ಆಮೇಲೆ ನಾವು ಬೇಕು ಅಂದರೂ ದೇವರು ಕೊಡಲ್ಲ.. ” ಆಕೆಯ ಒಡಲಲ್ಲಿ ಅತೀವ ಸಂಕಟ ಇದ್ದಿದ್ದು ಕಾಣಿಸಿತು. 
“ಇಲ್ಲಾ… ಈಗಿನ್ನೂ ಮದುವೆಯಾಗಿ ತಿಂಗಳಾಗಿದೆ ಅಷ್ಟೇ.. ಇಷ್ಟು ಬೇಗ ಇಬ್ಬರಿಗೂ ಮನಸ್ಸಿಲ್ಲ… ” ಅನ್ನುವಾಗ ನನ್ನ ನಾಲಗೆಯಲ್ಲಿ ಸುಳ್ಳು ಹೇಳುವಾಗಿನ ತಡವರಿಕೆ.
“ನಾವು ಮದುವೆಯಾಗಿ ಹತ್ತು ವರ್ಷಗಳಾಯಿತು…  ಮೊದಮೊದಲು ನಾವೂ ಹೇಗೆ ಈಗ ಬೇಡಾಂತ ಟ್ಯಾಬ್ಲೆಟ್ಸ್ ತಗೊಂಡು ಮುಂದೆ ಹಾಕುತ್ತಲೇ  ಬಂದ್ವಿ. ಈಗ ಐದಾರು ವರ್ಷಗಳಿಂದ ಅದೆಷ್ಟು ಮದ್ದು, ಹರಕೆ, ಔಷಧ ಮಾಡಿದರೂ ಗರ್ಭ ಫಲಿಸುತ್ತಿಲ್ಲ… ”  ಮಾತು ನಿಲ್ಲಿಸಿದರು ಆಕೆ. 
ನನ್ನೊಳಗೆ ಸಂಕಟ. ಈಗಷ್ಟೇ ಮೊಳಕೆಯೊಡೆಯುತ್ತಿದ್ದ ನನ್ನದೇ ಜೀವವನ್ನು ಸ್ವಾರ್ಥಕ್ಕಾಗಿ ತೆಗೆಸಬಂದ ನಾನು, ಮತ್ತು ಮಗುವಿಗಾಗಿ ಹಂಬಲಿಸುತ್ತಿರುವ ಆಕೆ.. ಈ ಬದುಕಿಗೆ ಎಷ್ಟೊಂದು ಮಜಲುಗಳು…?! ಯೋಚನೆಗೆ ಕೂತಿದ್ದೆ. ಅಷ್ಟರಲ್ಲಿ ಇವ ಬಂದ. ಒಂದಿಷ್ಟು ಔಷಧಿಗಳು, ಎಳನೀರು ಸಹಿತ ಬಂದಿದ್ದ. ನನ್ನ ಕಣ್ಣಲ್ಲಿ ನೀರಪೊರೆ ಕಂಡು ಗಾಬರಿ ಇವನಿಗೆ..ಎದೆಗೊತ್ತಿಕೊಂಡ ಅಲ್ಲಿಗೆ ನಾನು ಕೊಂಚ ನಿರಾಳ. ಹದಿನೈದು ನಿಮಿಷ ಕಳೆದಿರಬೇಕು ಸಿಸ್ಟರ್ ಬಂದು ಆರ್ನಮೆಂಟ್ಸ್ ತೆಗೆದು ರೆಡಿಯಾಗಿ, ಬಟ್ಟೆ ಬಿಚ್ಚಿ ಈ ಬಟ್ಟೆ ಹಾಕಿಕೊಳ್ಳಿ ಎಂದು ಹಸುರು ಬಣ್ಣದ ಗೌನ್ ಕೊಟ್ಟರು. ಉಮಾಗೋಲ್ಡ್ ತಾಳಿ, ಅಲ್ಲೇ ಕೊಂಡ ಬೆಳ್ಳಿ ಬಣ್ಣದ ಕಾಲುಂಗುರ, ಬಳೆ, ಕಿವಿಯೋಲೆ, ಕೂದಲು ಸುತ್ತಿ ಕಟ್ಟಿದ್ದ ಕ್ಲಿಪ್ ಎಲ್ಲ ತೆಗೆದು ಗೌನ್ ಹಾಕಿಕೊಳ್ಳಲು ತಯಾರಾದೆ. ಯಾಕೋ ಮೈಯೆಲ್ಲಾ ಭಾರ ಭಾರ. ನನ್ನವನೇ ಗೌನ್ ಸುತ್ತಿದ.ನನ್ನವನೂ ಭಯ ಬಿದ್ದಿದ್ದ. ಆದರೂ ನನಗೆ ಧೈರ್ಯ ತುಂಬುವ ಸಲುವಾಗಿ ತಾನು ಗೆಲುವಾಗಿ ಇರುವಂತೆ ತನ್ನನ್ನು ತಾನು ಮ್ಯಾನೇಜ್ ಮಾಡುತ್ತಿದ್ದ.  ಮತ್ತೊಂದು ಹತ್ತು ನಿಮಿಷಕ್ಕೆ ಅಪರೇಷನ್ ಥಿಯೇಟರ್ ಒಳಗೆ ನನ್ನ ಕರೆದುಕೊಂಡು ಹೋಗಲಾಯಿತು. ಈಗ ಇವನ ಕಣ್ಣೂ ತೇವ ತೇವ..

ಒಳಗೆ ಇದ್ದಿದ್ದು ಭರ್ಜರಿ ದೊಡ್ಡ ದೊಡ್ಡ ವೈದ್ಯೋಪಕರಣಗಳು. ನನಗೆ ಸಣ್ಣಗೆ ಭಯ. ಅಮ್ಮ ಹೇಳಿಕೊಟ್ಟ ಶ್ಲೋಕಗಳು ನಾಲಗೆ ತುದಿಯಲ್ಲಿ ಬಂದು ನಿಂತಿತ್ತು. ಅದೇನು ಅನಸ್ತೇಶಿಯ ಅಂತ ಮಾಡಿದರೋ, ನನಗೆ ಒಳಗೆ ಏನು ನಡೆಯಿತು ಎಂಬುದರ ಸಣ್ಣ ಅರಿವೂ ಆಗಿಲ್ಲ. ನನಗೆ ಜ್ಞಾನ ಬರುವಷ್ಟರಲ್ಲಿ ಅಲ್ಲಿಂದ ಹೊರಗೆ ತರುತ್ತಿದ್ದರು. ನನ್ನವ ಹೊರಗೆ ನಿಂತುಕೊಂಡೇ ಕಾಯುತ್ತಿದ್ದ, ಮುಖ ಮಬ್ಬಾಗಿ ಕಾಣಿಸುತ್ತಿತ್ತು. ಮತ್ತೆ ವಾರ್ಡ್ ಗೆ ಬಂದ ಮೇಲೆ ನಿದ್ದೆ ನನಗೆ. ಎಚ್ಚರ ಆಗುವವರೆಗೂ ಕಾಯ್ದುಕೊಂಡೇ ಕೂತಿದ್ದ.ಎಚ್ಚರವಾದ ಮೇಲೆ ಸಿಸ್ಟರನ್ನು ಕರೆದು “ಎಳನೀರು ಈಗ ಕುಡಿಸಬಹುದಾ..? ”  ಕೇಳಿದ. “ಕುಡಿಸಿ. ವಾಂತಿ ಆಗಿಲ್ಲ ಅಂದ್ರೆ ಇನ್ನೊಂದು ಬೇಕಾದ್ರೂ ಕೊಡಿ, ೨ಗಂಟೆಗಳಾದ ಮೇಲೆ ಏನಾದರೂ ತಿನ್ನಬಹುದು” ಅಂದರು .ವಾಂತಿ ಶುರುವಾದರೆ ಇವತ್ತೊಂದು ದಿನ ಇಲ್ಲೇ ಉಳಿಯಬೇಕಾಗುತ್ತದೆ ಎಂಬ ಷರತ್ತು ಬೇರೆ. ಇವ ನನ್ನ ನಿದಾನವಾಗಿ ಬೆನ್ನಿಗೆ ದಿಂಬಿನ ತನ್ನ ತೋಳಿನ ಆಧಾರ ಕೊಟ್ಟು ಕೂರಿಸಿದ. ಒಂದೊಂದೇ ಡ್ರಾಪ್ ಎಳನೀರು ಕುಡಿಸಿದ, ಲವ್ ಯು ಅಂತ ಪಿಸುಗುಟ್ಟಿದ. ಅವನ ಆ ಮಾತಿನಲ್ಲಿ ನೂರನೇ ಬಲ ನನ್ನಲ್ಲಿ. ವಾಂತಿಯಾಗಲಿಲ್ಲ…ತಾಳಿ, ಕಾಲುಂಗುರ, ನನ್ನ ಬಟ್ಟೆಗಳನ್ನು ಧರಿಸಿದೆ.  ಒಂದೆರಡು ಗಂಟೆ ಬಿಟ್ಟು ಬಿಲ್ಲು ಸೆಟಲ್ ಮಾಡಿ ನಾವು ಹೊರಟೆವು. 

ಮನೆಗೆ ಬಂದ ಮೇಲೆ ಗಂಜಿ ಮಾಡಿ ಕುಡಿಸಿದ. ತಾಳಿ,ಕಾಲುಂಗುರ ಬಿಚ್ಚಿಟ್ಟೆ.
ಪ್ರೀತಿಸುವವರೂ ಇತ್ತೀಚಿಗೆ ಲೀವ್ ಇನ್ ರಿಲೇಶನ್ ಶಿಪ್ ಗೆ ಬಂದುಬಿಡುತ್ತಾರೆ.. ಹಾಗೆ ಪ್ರೀತಿಸುತ್ತಲೇ ಲೀವ್ ಇನ್ ರಿಲೇಶನ್ ಶಿಪ್ ಗೆ ಬಂದು ಬಿಟ್ಟಿದ್ದೆವು.. ಎಡವಟ್ಟೂ ಆಗಿ ಹೋಗಿತ್ತು. ಮದುವೆಗೆ ಮುಂಚೆ ಮತ್ತು ಇಷ್ಟು ಚಿಕ್ಕವಯಸ್ಸಿಗೆ ಮಗು ಬೇಡವೆಂಬ ನಿಲುವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಕರುಳಿಗೆ ಬೆಸೆದ ಕುಡಿಯನ್ನು ಕತ್ತರಿಸಲು ಸಮಾಜದ ಮುಂದೆ ತಾಳಿ, ಕಾಲುಂಗುರ ತೊಟ್ಟು ಗರ್ಭ ಕತ್ತರಿಸಿಕೊಂಡೂ ಬಂದೆವು. ಅಂವ ಗಂಡ ಅನಿಸಿಕೊಂಡಷ್ಟೂ ಹೊತ್ತು ಅದೇನೋ ಸೆಕ್ಯೂರ್ ಫೀಲ್ ನನ್ನಲ್ಲಿ. ಗಿಡದಿಂದ ಕತ್ತರಿಸಿಕೊಂಡು ಗಾಳಿಯಲ್ಲಿ ತೇಲುತ್ತಿರುವ ಹೂವೊಂದು ನೆಲ ಸೋಕಲಾರದಂತೆ ಇವ ಸಂರಕ್ಷಿಸುತ್ತಾನೆ ಎಂಬ ಭಾವ.
ಈಗ ಇವನನ್ನು ಮುಂದೆ ಕೂರಿಸಿ, “ಗಂಡ ಹೆಂಡತಿಯಂತೆ ಈ ಸಮಾಜದ ಮುಂದೆಯೂ ಇರುವುದು ಎಷ್ಟು ಚಂದ ಅಲ್ಲವಾ… ?” ಅಂದೆ. 
ನನ್ನ ಒಂದೇ ಮಾತಿಗೆ ಎರಡೂ ಮನೆಯವರನ್ನೂ ಒಪ್ಪಿಸಿ ಮದುವೆಯಾಗಿದ್ದಾನೆ ಈಗ. ಲೀವ್ ಇನ್ ಗಿಂತಲೂ ಮತ್ತೂ ಚಂದವಿದೆ ಬದುಕು ಈಗ. ಈ ಚಂದದ ಬದುಕಲ್ಲೂ ಕಾಡುವ ಒಂದೇ ಒಂದು ಕೊರತೆಯೆಂದರೆ ಭ್ರೂಣ ಹತ್ಯೆ ಮಾಡಿದ ಪಾಪಪ್ರಜ್ಞೆ ಮತ್ತು ಆ ಹೆಂಗಸಿನ ಕಣ್ಣಲ್ಲಿ ಇದ್ದ ಸಂಕಟ. ಮುಂದೆ ಆ ಹೆಂಗಸಿನ ಜಾಗದಲ್ಲಿ ನಾನು ಇದ್ದುಬಿಟ್ಟರೆ ಎಂಬ ಭಯ.. ಗಿಲ್ಟಿ ಎನ್ನುವ ಆಸಾಧ್ಯ ನೋವು ಬದುಕುನುದ್ದಕ್ಕೂ ನಮ್ಮಿಬ್ಬರನ್ನೂ ಕಾಡುತ್ತಿದೆ. 

(ವಿ.ಸೂ: ಕಾಲ್ಪನಿಕ ಬರಹ)

Leave a comment

Blog at WordPress.com.

Up ↑